ನಾರ
ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿರುವ ಕಾಲುವೆ. ಇದು ಹಿಂದೆ ಸಿಂದೂ ನದಿಯ ಪಾತ್ರವಿದ್ದಿರಬಹುದೆಂದು ಭಾವಿಸಲಾಗಿದೆ. ಸಿಂದೂ ನದಿಯ ಪೂರ್ವ ಭಾಗದಲ್ಲಿ ದಕ್ಷಿಣಕ್ಕೆ ಹಾಯುವ ಈ ಕಾಲುವೆಯಲ್ಲಿ ಸಿಂದೂ ನದಿಯಿಂದ ಸೋರಿದ ನೀರು ಹರಿದು ಬರುತ್ತದೆ. ಪೂರ್ವ ನಾರ ಕಾಲುವೆ ಎಂದು ಕರೆಯಲಾಗಿರುವ ಇದನ್ನು ನೀರಾವರಿಗಾಗಿ ಬಳಸಲಾಗಿದೆ. ಈ ಕಾಲುವೆಯ ನೀರಿನ ಪೂರೈಕೆಯನ್ನು ಹೆಚ್ಚಿಸುವ ಸಲುವಾಗಿ ರೋಹರಿ ಬಳಿ ಸಿಂದೂ ನದಿಯಿಮದ 19 ಕಿಮೀ. ಉದ್ದದ ಕಾಲುವೆಯನ್ನು ತೋಡಿ ಇದಕ್ಕೆ ಸೇರಿಸಲಾಯಿತು. ಇದರಿಂದ 6,00,000 ನೆಲಕ್ಕೆ ನೀರಾವರಿ ಸೌಲಭ್ಯ ಒದಗಿದೆ. ಇದರ ಮುಖ್ಯ ಶಾಖೆಯಾದ ಜಾಮ್ರಾವ್‍ಧಾರ್, ಪಾರ್ಕರ್ ಮತ್ತು ಹೈದರಾಬಾದ್ ಜಿಲ್ಲೆಗಳಿಗೆ ನೀರು ಒದಗಿಸುತ್ತದೆ. ಇದು ಸೇರಿ ನಾರ ಕಾಲುವೆಯ ಒಟ್ಟು ಉದ್ದ 821 ಕಿಮೀ. ಶಾಖಾ ನಾಲೆಗಳಿಗೆ ಇದರಿಂದ ಸದಾ ನೀರು ಒದಗುತ್ತದೆ.  	
	(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ